ಸಾಮಾನ್ಯವಾಗಿ ಹೆಣ್ಣು ಮಕ್ಕಳು ಮದುವೆಗಿಂತ ಮುಂಚೆ ಸೌಂದರ್ಯಕ್ಕೆ ಹೆಚ್ಚಿನದಾದ ಒತ್ತು ನೀಡುತ್ತಾ ಸುಂದರ ಮೈಕಟ್ಟನ್ನು ಹೊಂದಿರುತ್ತಾರೆ. ಜೀರೋ ಸೈಜ್ ಮೆಂಟೇನ್ ಮಾಡುವ ಭರದಲ್ಲಿ ತಮಗಿಷ್ಟವಾದ ಆಹಾರವನ್ನು ಬಿಟ್ಟಾದರೂ ಸರಿ, ಬಳುಕುವಂತಹ ತೆಳ್ಳನೆಯ ದೇಹದ ಆಕಾರವನ್ನೇ ಇಟ್ಟುಕೊಂಡು ಬಂದಿರುತ್ತಾರೆ. ಆದರೆ ಮದುವೆಯ ನಂತರ ಇಂತಹ ತೇಳ್ಳನೆಯ ದೇಹಗಳು ಕೂಡ ದಪ್ಪವಾಗಿ ಮಾರ್ಪಾಡಾಗುವುದನ್ನು ಹೆಚ್ಚಿನ ಮಂದಿಯಲ್ಲಿ ಕಾಣುತ್ತೇವೆ.
ಮದುವೆಯ ನಂತರ ಹೆಣ್ಣು ಮಕ್ಕಳಲ್ಲಿ ಅನೇಕ ಬದಲಾವಣೆಗಳು ಆಗುತ್ತದೆ. ಬದಲಾವಣೆಗಳ ಪಟ್ಟಿಯಲ್ಲಿ ತೂಕ ಹೆಚ್ಚಾಗುವುದು ಕೂಡ ಒಂದು. ದೇಹದಲ್ಲಿ ಬೊಜ್ಜು ತುಂಬಿಕೊಳ್ಳುವುದು ಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ಸಮಸ್ಯೆಯಾಗಿದೆ ಅಂತೆಯೇ ಮದುವೆ ನಂತರ ದಪ್ಪವಾಗುವುದು ಸಹಜವೆಂದು ತಿಳಿಯುತ್ತಾರೆ. ಇದು ಸಹಜವೇ ಆದರೆ ಹೆಚ್ಚಾಗಲು ಬೇರೇನೋ ಕಾರಣವೆಂಬ ಭ್ರಮೆಯಲ್ಲಿರುತ್ತಾರೆ.
ಅನೇಕ ಜನರು ಅಂದುಕೊಳ್ಳುವುದು ಲೈಂಗಿಕ ಕ್ರಿಯೆಯೇ ತೂಕ ಹೆಚ್ಚಾಗಲು ಕಾರಣವೆಂದು. ಲೈಂಗಿಕ ಕ್ರಿಯೆಯು ಗಂಡು ಹೆಣ್ಣಿನ ದಾಂಪತ್ಯ ಜೀವನದ ಒಂದು ಭಾಗವಷ್ಟೇ. ದೇಹದ ಕೆಲವು ಭಾಗಗಳಲ್ಲಿನ ಬೆಳವಣಿಗೆ, ಸೊಂಟದ ಭಾಗದಲ್ಲಿ ಶೇಖರಣೆಗೊಳ್ಳುವ ಬೊಜ್ಜು ಇಂತಹ ತುಸು ಬದಲಾವಣೆಗೆ ಲೈಂಗಿಕ ಕ್ರಿಯೆಯು ಕಾರಣವಾದರೂ, ದೈತ್ಯಾಕಾರವಾಗಿ ಮಾರ್ಪಾಡಾಗುವ ದೇಹಕ್ಕೆ ಕಾರಣವಲ್ಲ.
ಸ್ತ್ರೀಯರಲ್ಲಿ ಮದುವೆಯ ನಂತರ ಸಹಜವಾಗಿಯೇ ಬದಲಾಗುವ ದೇಹಕ್ಕೆ, ಆಹಾರ ಅಭ್ಯಾಸಗಳಲ್ಲಿನ ವ್ಯತ್ಯಾಸವು ಕೂಡ ಒಂದು. ಮದುವೆಗಿಂತ ಮೊದಲು ತೆಗೆದುಕೊಳ್ಳುತ್ತಿರುವ ಆಹಾರ, ಆಹಾರವನ್ನು ತೆಗೆದುಕೊಳ್ಳುತ್ತಿದ್ದ ಸಮಯ ಎಲ್ಲವೂ ತಮ್ಮದೇ ಸ್ವಂತ ಸಂಸಾರವೆಂದು ಪ್ರಾರಂಭವಾದ ಬಳಿಕ ವ್ಯತ್ಯಾಸಗೊಳ್ಳುತ್ತದೆ. ಮುಂಜಾವಿನ ವೇಳೆ ಶಾಲೆಗೆ ಹೊರಡುವ ಮಕ್ಕಳಿಗಾಗಿ, ಕೆಲಸಕ್ಕೆ ಸಜ್ಜಾಗುವ ಗಂಡನಿಗಾಗಿ ಕೊಂಚ ಸಮಯ ಮೀಸಲಿಡುವ ಮಹಿಳೆ ತಾನು ಆಹಾರವನ್ನು ಸಮಯ ಮೀರಿ ತೆಗೆದುಕೊಳ್ಳುತ್ತಾಳೆ ಅಲ್ಲದೆ ಕೆಲವೊಮ್ಮೆ ಹೊರಗಡೆಯಿಂದ ಬರುವ ಪತಿಗಾಗಿ ಕಾದು ಕಾದು ವೇಳೆ ಹೆಚ್ಚಾಗಿರುತ್ತದೆ.
ಮಹಿಳೆಯು ಕೆಲಸದ ಒತ್ತಡಗಳೊಂದಿಗೆ, ತನ್ನವರ ಕಾಳಜಿಯಿಂದ ಕೊಂಚ ಆತಂಕದಲ್ಲಿಯೇ ಇರುತ್ತಾಳೆ. ಮಕ್ಕಳ ಲಾಲನೆ ಪಾಲನೆಯಲ್ಲಿ ಸಮಯ ಕಳೆಯುವ ಮಹಿಳೆ ಸದಾಕಾಲ ಜಾಗೃತೆಯಿಂದ, ನಾಜೂಕಿನಿಂದ ಕಾರ್ಯನಿರ್ವಹಿಸುತ್ತಿರುತ್ತಾಳೆ. ಯೋಗ, ವ್ಯಾಯಾಮಗಳಲ್ಲಿ ನಿರ್ಲಕ್ಷ್ಯ ತೋರಿಸಲು ಸಮಯದ ಅಭಾವವು ಕಾರಣ ಹೌದು. ಮದುವೆಯ ನಂತರ ಮಹಿಳೆಯು ದಪ್ಪವಾಗಲು ಇವೆಲ್ಲ ಕಾರಣಗಳ ಜೊತೆ ಆಧುನಿಕ ಯುಗದ ಜೀವನ ಶೈಲಿ ಮತ್ತು ಕೆಲಸವನ್ನು ಸುಲಭವಾಗಿಸುವ ಯಂತ್ರಗಳು ಮುಖ್ಯ ಕಾರಣವೆಂದರೆ ತಪ್ಪಾಗಲಾರದು.
ಒತ್ತಡವನ್ನು ಸಹಿಸಿಕೊಳ್ಳಲು ಧ್ಯಾನ, ದೇಹದ ಎಲ್ಲಾ ಕಾರ್ಯ ಚಟುವಟಿಕೆಗಳಿಗೆ ಅನುಕೂಲವಾಗುವಂತಹ ವ್ಯಾಯಾಮ, ಶಿಸ್ತು ಬದ್ಧ ಆಹಾರ ಪದ್ಧತಿ ಇವುಗಳನ್ನು ಸರಿಯಾಗಿ ಪಾಲಿಸಿಕೊಂಡು ಹೋದರೆ ಮದುವೆಯ ನಂತರವೂ ಮಹಿಳೆಯರು ಮೊದಲಿನಂತೆಯೇ ತೆಳ್ಳಗಿನ ದೇಹವನ್ನೇ ಇಟ್ಟುಕೊಂಡು ಬದುಕಬಹುದು ಎಂಬುದು ಅನುಭವಿಗಳ ಸಲಹೆ.