Sunil and lakshmi priya story : ಸಾಮಾಜಿಕ ಜಾಲತಾಣಗಳ ವಿಚಾರದಲ್ಲಿ ಎಷ್ಟು ಜಾಗರೂಕರಾಗಿದ್ದರೂ ಸಾಲದು. ಸಾಮಾನ್ಯವಾಗಿ ಸಾಮಾಜಿಕ ಜಾಲತಾಣಗಳಿಂದ ಮೋಸ ಹೋಗುವವರು ಹೆಚ್ಚು.. ಸೋಶಿಯಲ್ ಮೀಡಿಯಾದಿಂದ ಪರಿಚಿತರಾಗಿ ಮೋಸ ಹೋದ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇರುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಸ್ನೇಹಿತರಾದವರನ್ನು ಮನೆಗೆ ಆಹ್ವಾನಿಸುವ ಮುನ್ನ ಸ್ವಲ್ಪ ಎಚ್ಚರಿಕೆಯಿಂದ ಇರುವುದು ಒಳ್ಳೆಯದು..
ಈ ಸೋಶಿಯಲ್ ಮೀಡಿಯಾದಲ್ಲಿ ಗಾಳ ಹಾಕಿ ಸುಲಿಗೆ ಮಾಡುವ ಇಬ್ಬರೂ ಆರೋಪಿಗಳು ಪೊಲೀಸರ ಅತಿಥಿಯಾಗಿದ್ದಾರೆ. ಹಣದೋಚುತ್ತಿದ್ದವ ಇಬ್ಬರನ್ನು ಸೋಲದೇವನಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮೋಸ ಹೋದ 26 ವರ್ಷದ ವ್ಯಕ್ತಿಯೊಬ್ಬ ನೀಡಿದ ದೂರಿನ ಅನ್ವಯ ಇಬ್ಬರನ್ನು ಬಂಧಿಸಲಾಗಿದ್ದು ಸುನಿಲ್ ಹಾಗೂ ಲಕ್ಷ್ಮಿಪ್ರಿಯ ಬಂಧಿತ ಆರೋಪಿಗಳಾಗಿದ್ದಾರೆ.
ದೂರುದಾರ ವ್ಯಕ್ತಿಗೆ ಸೋಶಿಯಲ್ ಮೀಡಿಯಾದ ಮೂಲಕ ದಿವ್ಯಾ ಎಂಬ ಹೆಸರಿನ ಹುಡುಗಿಯ ಪರಿಚಯವಾಗಿದೆ. ಈ ಪರಿಚಯದಿಂದ ಸಲುಗೆ ಸಂಪಾದಿಸಿದ್ದ ದೂರುದಾರನು ಒಂದಷ್ಟು ಫೋಟೋ, ವಿಡಿಯೋಗಳನ್ನು ಯುವತಿಗೆ ಕಳುಹಿಸಿದ್ದನು. ಆದರೆ ಸೋಶಿಯಲ್ ಮೀಡಿಯಾದ ಮೂಲಕ ಪರಿಚಯವಾದ ವ್ಯಕ್ತಿಯನ್ನು, ದೂರುದಾರ ಯುವಕ ಜನವರಿ 4ರಂದು ತನ್ನ ಮನೆಗೆ ಆಹ್ವಾನಿಸಿದ್ದನು.
ದಿವ್ಯಾ ಎಂಬ ಹೆಸರಿನಲ್ಲಿ ಪ್ರತಿಕ್ರಿಯಿಸಿದ್ದ ಆರೋಪಿಯಾಗಿರುವ ಸುನಿಲ್ ‘ನಾನು ಇವತ್ತು ಬ್ಯುಸಿ, ನನ್ನ ಸಹೋದರಿ ಲಕ್ಷ್ಮಿಪ್ರಿಯಳನ್ನು ಮನೆಗೆ ಕಳಿಸುವುದಾಗಿ ಹೇಳಿದ್ದನು. ಹೀಗಾಗಿ ದೂರುದಾರ ವ್ಯಕ್ತಿಯೂ, ಆರೋಪಿ ಲಕ್ಷ್ಮಿಪ್ರಿಯಳನ್ನು ಕೊಡುಗೆ ತಿರುಮಲಾಪುರದ ತನ್ನ ಮನೆಗೆ ಕರೆದುಕೊಂಡು ಹೋಗಿದ್ದನು. ಮನೆಯೊಳಗೆ ಹೋಗುತ್ತಿದ್ದಂತೆ ಆಗಮಿಸಿದ್ದ ಸುನಿಲ್, ದೂರುದಾರನಿಗೆ ‘ನೀನು ಲಕ್ಷ್ಮಿಪ್ರಿಯಳನ್ನು ಜೊತೆಯಲ್ಲಿ ಕರೆ ತಂದಿರುವ ವಿಡಿಯೋ, ಫೋಟೋ ಪೊಲೀಸರಿಗೆ ಕೊಡುವುದಾಗಿ ಬೆದರಿಕೆ ಹಾಕಿದ್ದನು.

ಕೊನೆಗೆ ಈ ಇಬ್ಬರೂ ಕೂಡ ದೂರುದಾರನ ಮನೆಯಲ್ಲಿದ್ದ 45 ಗ್ರಾಂ ಚಿನ್ನಾಭರಣ, ನಗದು ಕಿತ್ತುಕೊಂಡು ಬೈಕಿನಲ್ಲಿ ಪರಾರಿಯಾಗಿದ್ದು, ಈ ಮೂಲಕ ನಂಬಿಕೆ ಇಟ್ಟು ಮನೆಗೆ ಕರೆದಿದ್ದವನಿಗೆ ಪಂಗನಾಮ ಹಾಕಿದ್ದಾರೆ.ಮೋಸ ಹೋಗಿರುವ ವ್ಯಕ್ತಿಯೂ ಪೊಲೀಸರಿಗೆ ದೂರು ನೀಡಿದ್ದು, ಈ ದೂರಿನನ್ವಯ ಕಾರ್ಯಾಚರಣೆ ಕೈಗೊಂಡ ಸೋಲದೇವನಹಳ್ಳಿ ಪೊಲೀಸರು ಇಬ್ಬರೂ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಅದರ ಜೊತೆಗೆ ಆರೋಪಿಗಳಿಂದ 2.2 ಲಕ್ಷ ಮೌಲ್ಯದ 45 ಗ್ರಾಂ ಚಿನ್ನಾಭರಣ, 1 ಮೊಬೈಲ್ ಹಾಗೂ 2 ದ್ವಿಚಕ್ರ ವಾಹನಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಎಂದು ಉತ್ತರ ವಿಭಾಗದ ಡಿಸಿಪಿ ವಿನಾಯಕ್ ಪಾಟೀಲ್ ಎಂದು ಮಾಹಿತಿ ನೀಡಿದ್ದಾರೆ.. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿನ ಅಪರಿಚಿತ ವ್ಯಕ್ತಿಯ ಜೊತೆಗೆ ಸ್ನೇಹ ಬೆಳೆಸಿ ಮನೆಗೆ ಕರೆಯುವ ಮುನ್ನ ಜೋಕೆಯಿರಲಿ.