ಸೌಂದರ್ಯ(Soundarya) ಅವರು ಜುಲೈ 18 1972 ರಲ್ಲಿ ಜನಿಸಿದರು. ಇವರ ಮೊದಲ ಹೆಸರು ಸೌಮ್ಯ ಎಂಬುದಾಗಿತ್ತು. ಕನ್ನಡ ಚಿತ್ರರಂಗದ ಬರಹಗಾರ ಮತ್ತು ನಿರ್ಮಾಪಕರಾದ K. S. ಸತ್ಯನಾರಾಯಣ ಅವರ ಪುತ್ರಿಯಾದ ಸೌಂದರ್ಯ ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ನಟಿಸಿ ಬಹುಭಾಷಾ ನಟಿ ಎನಿಸಿಕೊಂಡಿದ್ದಾರೆ. ‘ಬಾ ನನ್ನ ಪ್ರೀತಿಸು’ ಚಿತ್ರದ ಮೂಲಕ ಚೊಚ್ಚಲ ಹೆಜ್ಜೆ ಇಟ್ಟು ಅಲ್ಪಾವಧಿಯಲ್ಲಿ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
ರಜನಿಕಾಂತ್, ಅಮಿತಾಬಚ್ಚನ್, ವಿಷ್ಣುವರ್ಧನ್, ರವಿಚಂದ್ರನ್, ಅಂಬರೀಶ್ ಹೀಗೆ ಜನಪ್ರಿಯ ಕಲಾವಿದರೊಂದಿಗೆ ನಟಿಸಿರುವ ಸೌಂದರ್ಯ ಅವರ ಅಭಿನಯವನ್ನು ಎಲ್ಲರೂ ಹಾಡಿ ಹೊಗಳಿದವರೇ.. ಹೆಸರೇ ಹೇಳುವ ಹಾಗೆ ರೂಪವತಿ ಇವರು. ದಕ್ಷಿಣ ಭಾರತದ ಫಿಲಂ ಫೇರ್ ಅವಾರ್ಡ್ 6 ಬಾರಿ, ಕರ್ನಾಟಕ ಸ್ಟೇಟ್ ಫಿಲಂ ಅವಾರ್ಡ್ 2 ಬಾರಿ , ನಂದಿ ಅವಾರ್ಡ್ 2 ಬಾರಿ, ನ್ಯಾಷನಲ್ ಫಿಲ್ಮ್ ಅವಾರ್ಡ್ ಗಳು ದೊರೆತಿವೆ.
ಸೌಂದರ್ಯ ಅವರು software engineer, ಜಿ ಎಸ್ ರಘು ಅವರನ್ನು ಮದುವೆಯಾಗಿದ್ದರು. ಏಪ್ರಿಲ್ 17 2004ರ ಬೆಂಗಳೂರಿನಿಂದ ಕರಿಮನಗರಕ್ಕೆ ಪ್ರಯಾಣಿಸುವ ವೇಳೆ, ವಿಮಾನ ದುರಂತದಲ್ಲಿ ಕೊನೆಯುಸಿರೆಳೆದರು. ಕೋಲಾರದಿಂದ ಸುಮಾರು 30 km ದೂರದಲ್ಲಿರುವ ಗಂಜಿಗುಂಡಿ ಗ್ರಾಮದ ಮನೆಯಲ್ಲಿ ಸೌಂದರ್ಯ ಅವರು ನಲಿದಾಡಿರುವ ನೆನಪುಗಳಿವೆ.
ಶಾಲಾ ಕಾಲೇಜುಗಳ ರಜೆಯ ವೇಳೆಯಲ್ಲಿ ಅಜ್ಜಿ ಮತ್ತು ತಾತನೊಂದಿಗೆ ಕಾಲ ಕಳೆಯಲು ಸೌಂದರ್ಯ ಅವರು ಗಂಜಿಗುಂಡಿ ಮನೆಗೆ ತೆರಳಿ ತುಂಟಾಟಗಳನ್ನು ಆಡುತ್ತಿದ್ದರಂತೆ. ಬಂದಾಗ ತಿಂಗಳುಗಟ್ಟಲೆ ಅಲ್ಲೇ ಇರುತ್ತಿದ್ದರಂತೆ. ಮನೆಯ ಅಂಗಳದಲ್ಲಿ ಕೂತು ಕಮಲಜ್ಜಿಯ ಕೈಯಿಂದ ಕೂದಲು ಬಾಚಿಸಿಕೊಳ್ಳುತ್ತಿದ್ದರಂತೆ.
ಚಿತ್ರೀಕರಣದ ಬಿಡುವಿನ ವೇಳೆಯಲ್ಲಿ ಒಂದರಿಂದ ಎರಡು ದಿನದ ಮಟ್ಟಿಗೆ ಸೌಂದರ್ಯ ಅವರು ತಮ್ಮ ಊರಿಗೆ ಹೋಗಿ ಬರುತ್ತಿದ್ದರಂತೆ. ಅಜ್ಜಿ-ಅಜ್ಜ ಇಬ್ಬರೂ ಈಗ ತೀರಿ ಹೋಗಿದ್ದಾರೆ. ಮೊದಲು ಹಂಚಿಗಳಿಂದ ಮುಚ್ಚಿದ ಮನೆಯು ನವೀಕರಣಗೊಂಡಿದೆ. ಸೌಂದರ್ಯ ಅವರ ನೆನಪುಗಳನ್ನು ಹೊತ್ತ ಆ ಮನೆ ಇಂದಿಗೂ ರಾರಾಜಿಸುತ್ತಿದೆ.