ಭೋಪಾಲ್ ನಗರದ ಇಂದೋರ್ ನ ಮಹಾತ್ಮ ಗಾಂಧಿ ಸ್ಮಾರಕ ವೈದ್ಯಕೀಯ ಕಾಲೇಜಿಗೆ ವಿದ್ಯಾರ್ಥಿನಿಯಂತೆ ವೇಷ ಧರಿಸಿ ಮೂರು ತಿಂಗಳುಗಳ ಕಾಲ ಅದೊಂದು ಕೇಸ್ ನ ವಿಚಾರಣೆಗಾಗಿ ಲೇಡಿ ಕಾನ್ಸ್ಟೇಬಲ್ ಪ್ರತಿದಿನವೂ ಕಾಲೇಜ್ ಕ್ಯಾಂಪಸ್ ನಲ್ಲಿ ವಿದ್ಯಾರ್ಥಿಯಂತೆ ಅಲೆದು ಉಳಿದ ಮಕ್ಕಳೊಂದಿಗೆ ಬೆರೆತು ಆಗು ಹೋಗುಗಳ ಬಗ್ಗೆ ಸೂಕ್ಷ್ಮವಾಗಿ ಪರಿಶೀಲಿಸಿದ್ದಾರೆ.
ಪೋಲಿಸ್ ಕೆಲಸವೆಂದರೆ ಸುಮ್ಮನೆ ಅಲ್ಲ. ತಲೆ ಮರೆಸಿಕೊಂಡು ಓಡಾಡುವ ಆರೋಪಿಗಳನ್ನು ಹಿಡಿಯುವಾಗ, ರಹಸ್ಯಗಳನ್ನು ಭೇದಿಸುವಾಗ ಮಾರುವೇಶದಲ್ಲಿ ಚುರುಕಿನಿಂದ ಕಾರ್ಯನಿರ್ವಹಿಸಬೇಕಾಗುತ್ತದೆ. ಕಳ್ಳರೊಡನೆ ಕಳ್ಳರಾಗಿಯೇ ಬೆರೆತು ದಾಖಲೆಗಳನ್ನು ಪಡೆಯಬೇಕು ಎಂಬ ಮಾತಿಗೆ ಉದಾಹರಣೆಯಾಗಿ ಲೇಡಿ ಕಾನ್ಸ್ಟೇಬಲ್ ಕಾಲೇಜಿನ ಆಡಳಿತ ಮಂಡಳಿಯವರು ನೀಡಿದ ದೂರಿಗೆ ಕಾಲೇಜ್ ವಿದ್ಯಾರ್ಥಿನಿಯಾಗಿಯೇ ಹೋಗಿ ಕೇಸ್ ವಿಚಾರಿಸಿದ್ದಾರೆ.
ಮಹಾತ್ಮ ಗಾಂಧಿ ಸ್ಮಾರಕ ವೈದ್ಯಕೀಯ ಕಾಲೇಜಿನಲ್ಲಿ ರಾಗಿಂಗ್ ಹಾವಳಿಗಳು ಹೆಚ್ಚಾಗಿವೆ ಎಂದು ಕೇಳಿ ಬರುತ್ತಿದ್ದು, ತಡೆಗಟ್ಟಲು ಎಷ್ಟೇ ಕಠಿಣ ಕ್ರಮಗಳನ್ನು ಕೈಗೊಂಡರು ಕೂಡ ಕಾಲೇಜಿನ ಉಪನ್ಯಾಸಕರು ಹಾಗೂ ಆಡಳಿತ ಮಂಡಳಿಯವರು ಸೋತಿರುತ್ತಾರೆ. ಎಂತಹ ನಿಯಮಗಳನ್ನು ವಿದ್ಯಾರ್ಥಿಗಳ ಮೇಲೆ ಹೇರಿದರೂ ಕೂಡ ಉಳಿದ ವಿದ್ಯಾರ್ಥಿಗಳಿಗೆ ತೊಂದರೆ ಕೊಡುವವರು, ರಾಗಿಂಗ್ ನಡೆಸುವವರನ್ನು ಹಿಡಿದು ಅವರ ದುರ್ನಡತೆಗಳನ್ನು ಸರಿಪಡಿಸಲು ಸಾಧ್ಯವಾಗುವುದಿಲ್ಲ.
ಅದೇ ವಿಚಾರವಾಗಿ ಕಾಲೇಜಿನ ಆಡಳಿತ ಮಂಡಳಿಯವರು ಪೊಲೀಸರ ಮೊರೆ ಹೋಗಿ ದೂರನ್ನು ನೀಡಿರುತ್ತಾರೆ. ರಾಗಿಂಗ್ ಹಾವಳಿಗಳನ್ನು ನಿಯಂತ್ರಿಸುವ ಹಠ ಹೊತ್ತು, ಪೊಲೀಸ್ ಇಲಾಖೆಯವರು ರಹಸ್ಯ ಕಾರ್ಯಾಚರಣೆಯ ಕ್ರಮವನ್ನು ಕೈಗೆತ್ತಿಕೊಂಡು, ಕೇಸ್ ಅನ್ನು ಬಗೆಹರಿಸಿದ್ದಾರೆ. ಮಧ್ಯ ಪ್ರದೇಶ್ ಪೋಲಿಸ್ ಇಲಾಖೆಯ ಕಾನ್ಸ್ಟೇಬಲ್ ಆದ 24 ವರ್ಷದ ಶಾಲಿನಿ ಚೌಹಾಣ್ ಎಂಬುವವರು ವಿದ್ಯಾರ್ಥಿನಿಯಂತೆ ಮಾಫ್ತಿಯಲ್ಲಿ ಕಾಲೇಜಿಗೆ ಪ್ರತಿದಿನವೂ ತೆರಳಿ, ಯಾರಿಗೂ ಸಂದೇಹಬಾರದ ರೀತಿಯಲ್ಲಿ ಕ್ಯಾಂಪಸ್ ನಲ್ಲಿ ತಿರುಗಾಡುವ ಮಕ್ಕಳೊಂದಿಗೆ ಬೆರೆತು, ರಾಗಿಂಗ್ ಮಾಡುವುದರ ಮೂಲಕ ತೊಂದರೆ ಕೊಡುತ್ತಿದ್ದ 11 ಜನ ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಿದ್ದಾರೆ.
ಪ್ರತಿದಿನವೂ ಕಾಲೇಜಿಗೆ ತೆರಳಿ ತರಗತಿಗಳಿಗೆ ಮಾತ್ರ ಹೋಗದೆ, ಓದುಗರನ್ನೇ ಸ್ನೇಹಿತರನ್ನಾಗಿಸಿಕೊಂಡು ಕೀಟಲೆ ನೀಡುವ ವಿದ್ಯಾರ್ಥಿಗಳನ್ನು ಗುರುತಿಸಿ ತಮ್ಮ ಮೇಲಾಧಿಕಾರಿಗಳಿಗೆ ಹಾಗೂ ಕಾಲೇಜಿನ ಆಡಳಿತ ಮಂಡಳಿಯವರಿಗೆ ತಿಳಿಸಿರುತ್ತಾರೆ. ಇದೀಗ ಆ ವಿದ್ಯಾರ್ಥಿಗಳನ್ನು ಹಾಸ್ಟೆಲ್ ಹಾಗೂ ಕಾಲೇಜಿನಿಂದ ಅಮಾನತುಗೊಳಿಸುವಂತೆ ಆದೇಶ ಹೊರಡಿಸಲಾಗಿದೆಯಂತೆ. ಶಾಲಿನಿ ಚೌಹಾಣ್ ಅವರ ರಹಸ್ಯ ಕಾರ್ಯಾಚರಣೆಗೆ ಕಾಲೇಜಿಗೆ ಸಂಬಂಧಪಟ್ಟ ಎಲ್ಲರಿಂದ ಹಾಗೂ ವಿದ್ಯಾರ್ಥಿಗಳ ಪಾಲಕ, ಪೋಷಕರಿಂದ ಹರ್ಷ ವ್ಯಕ್ತವಾಗಿದೆಯಂತೆ.